ದುಬೈ ಪ್ರವಾಸಿಗರ ಸ್ವರ್ಗ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ತಾನೇ? ಅದನ್ನು ಪುಷ್ಟೀಕರಿಸುವ ವಿದ್ಯಮಾನ ಎನ್ನಬಹುದಾದ ಅಂಕಿಅಂಶಗಳು ಇದೀಗ ಬೆಳಕಿಗೆ ಬಂದಿದೆ. 2025 ಅಥವಾ ಈ ಇಸವಿಯ ಪ್ರಥಮ ಮೂರು ತಿಂಗಳಲ್ಲಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ವಾಗತಿಸಿದ ವಿದೇಶಿ ಪ್ರವಾಸಿಗರ ಲೆಕ್ಕ 23.4 ಮಿಲಿಯನ್ ದಾಟಿದೆ. ಈ ಬಗ್ಗೆ ಹೊಸ ವಿವರಗಳನ್ನು ನೀಡಿರುವ ಅಧಿಕಾರಿಗಳು ವಿಶ್ವದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನುವ ದುಬೈ ಏರ್ಪೋರ್ಟಿನ ಹೆಗ್ಗಳಿಕೆಗೆ ಗರಿಗಳನ್ನು ನೀಡಿದೆ ಎಂದು ಹೇಳುತ್ತಾರೆ. ವಿಶ್ವಾತ್ಮಕ ಪ್ರವಾಸಿ ತಾಣ ಎಂಬ ನೆಲೆಯಲ್ಲಿ ಎಮಿರೇಟ್‌ನ ಖ್ಯಾತಿ ದಿನೇ ದಿನೇ ಆಕಾಶಕ್ಕೆ ಜಿಗಿಯುತ್ತಿದೆ. ಜನವರಿ ತಿಂಗಳೊಂದರಲ್ಲೇ, ಬರೋಬ್ಬರಿ 8.5 ಮಿಲಿಯನ್ ಪ್ರಯಾಣಿಕರನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ವಾಗತಿಸಿದ್ದು ಹೊಸ ದಾಖಲೆ ನಿರ್ಮಿಸಿದೆ. ಹೀಗೆ ಬಂದಿರುವ ಪ್ರವಾಸಿಗರ ಪೈಕಿ ಬಹುಸಂಖ್ಯೆಯಲ್ಲಿರುವುದು ಭಾರತೀಯರು.
ಅಂಕಿ ಅಂಶಗಳ ಪ್ರಕಾರ ಜನವರಿಯಿಂದ
ಮಾರ್ಚ್ ವರೆಗೆ ಮಾತ್ರ ಭಾರತದಿಂದ 3 ಮಿಲಿಯನ್ ಅಥವಾ ಮೂವತ್ತು ಲಕ್ಷ ಪ್ರಯಾಣಿಕರು ಎಮಿರೇಟ್ಸ್ ಕಡೆ ಪ್ರಯಾಣ ಬೆಳೆಸಿದ್ದಾರೆ.
ಭಾರತದ ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ ಇದ್ದು 1.9 ಮಿಲಿಯನ್ ಅಥವಾ 19 ಲಕ್ಷ ಪ್ರವಾಸಿಗರು ಅಲ್ಲಿಂದ ಬಂದಿದ್ದಾರೆ.
ನಂತರದ ಸ್ಥಾನಗಳ್ಲಿ ಅನುಕ್ರಮವಾಗಿ ಯುಕೆ (1.5 ಮಿಲಿಯನ್/ಒಂದೂವರೆ ಲಕ್ಷ), ಪಾಕಿಸ್ತಾನ (1 ಮಿಲಿಯನ್/10 ಲಕ್ಷ), ಅಮೇರಿಕಾ (ಸರಿಸುಮಾರು ಎಂಟು ಲಕ್ಷ) ಮತ್ತು ಜರ್ಮನಿ (ಸರಿಸುಮಾರು ಏಳು ಲಕ್ಷ) ಇವೆ. ದುಬೈ
ನಗರದ ಚಳಿಗಾಲದ ಆಕರ್ಷಣೆಗಳು, ಈದ್ ಮತ್ತು ಶಾಲಾ ರಜಾದಿನಗಳು ಪ್ರಯಾಣಿಕರ ಸಂಖ್ಯೆಯ
ಏರಲು ಗಣನೀಯ ಕೊಡುಗೆ ನೀಡಿವೆ ಎನ್ನಲಾಗಿದೆ. ಇಷ್ಟು ಪ್ರಯಾಣಿಕರನ್ನು
ಸ್ವಾಗಿತಿಸಿದ್ದೇ ಅಲ್ಲದೆ, ಈ ವಿಮಾನ ನಿಲ್ದಾಣ ಮೂರು ತಿಂಗಳ ಅವಧಿಯಲ್ಲಿ ನಿರ್ವಹಿಸಿದ ಸರಕು ಹಾಗೂ
ಲಗೇಜುಗಳ ಸಂಖ್ಯೆ ಕೂಡಾ ಕಣ್ಣು ಕುಕ್ಕಿಸುವಂತಿದೆ. ಐದು ಲಕ್ಷಕ್ಕಿಂತಲೂ ಹೆಚ್ಚು ಟನ್ ಸರಕುಗಳು ಹಾಗೂ
ಎರಡು ಕೋಟಿಗಿಂತಲೂ ಹೆಚ್ಚಿನ ಲಗೇಜ್‌ಗಳನ್ನು ವಿಲೇವಾರಿ ಮಾಡಿದೆ.
ಈ ಕಾಲಾವಧಿಯಲ್ಲಿ ಹಾರಡಿದ
ವಿಮಾನದ ಸಂಖ್ಯೆಯಲ್ಲು ಹೆಚ್ಚಳ ಕಂಡುಬಂದಿದ್ದು ದಾಖಲೆಯಾದ ವಿಮಾನಗಳ ಸಂಖಯೆ ಒಂದು ಲಕ್ಷ ಹನ್ನೊಂದು
ಸಾವಿರ ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 1.9 ರಷ್ಟು ಪ್ರಮಾಣದ ಹೆಚ್ಚಳ ಇಲ್ಲಿ ದಾಖಲಾಗಿದೆ. ವಿಮಾನ ನಿಲ್ದಾಣದ
ಈ ಅತ್ಯುತ್ತಮ ಸಾಧನೆಗಳ ಹಿನ್ನೆಲೆಯಲ್ಲಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಚಟುವಟಿಕೆಗಳಿವೆ.
ಪ್ರಯಾಣಿಕರಿಗೆ ಅಭೂತಪೂರ್ವ ಯಾತ್ರಾನುಭವ ಒದಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಮತ್ತು
ಪಾಲಿಸಿಗಳನ್ನು ಜಾರಿಗೆ ತರುವ ಚಿಂತನೆಯನ್ನು ವಿಮಾನ ನಿಲ್ದಾಣ ಮಾಡುತ್ತಿದೆ.
ಈ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ
ಗಳಿಸಲು ಸಾಧ್ಯವಾಗಿರುವ ಕ್ಷಮತೆಯನ್ನು ವರ್ಷವಿಡೀ ಮುಂದುವರಿಸಲು ಬೇಕಾದ ಕ್ರಮ ಚಾಲನೆಯಲ್ಲಿದೆ ಎಂದು
ದುಬೈ ವಿಮಾನ ನಿಲ್ದಾಣದ ಸಿಇಒ ಪಾಲ್ ಗ್ರಿಫಿತ್ಸ್ ಹೇಳಿದ್ದಾರೆ. ಪ್ರಯಾಣಿಕರು ಕಾಯುವಿಕೆಯನ್ನು
ಕಡಿತಗೊಳಿಸುವಲ್ಲಿ ದುಬೈ ವಿಮಾನ ನಿಲ್ದಾಣದಲ್ಲಿನ ಸ್ಮಾರ್ಟ್ ವ್ಯವಸ್ಥೆಗಳು ನಿರ್ಣಾಯಕ ಪಾತ್ರ ವಹಿಸಿವೆ.
ವಿಶೇಷ ಚೇತನಗಳಿಗೆ ವಿಶೇಷ ಸೇವೆಗಳು ಸಹ ಲಭ್ಯವಿದೆ. ಸದ್ಯ 101 ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ದುಬೈ ಅಂತರಾಷ್ಟ್ರೀಯ ವಿಮಾನ
ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆ ನಿರ್ವಹಿಸುತ್ತಿದ್ದು 106 ದೇಶಗಳ 269 ನಗರಗಳಿಗೆ ವಿಮಾನಗಳು ಹಾರುತ್ತಿವೆ.
ದುಬೈ ವಿಮಾನ ನಿಲ್ದಾಣ ವಿಶ್ವದ
ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ ಎಂದು ಕಳೆದ ತಿಂಗಳಷ್ಟೇ ಏರ್ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್ ಘೋಷಿಸಿತ್ತು. ಸತತ
ಹನ್ನೊಂದನೇ ಬಾರಿಗೆ ದುಬೈ ಪ್ರಥಮ ಸ್ಥಾನದ ಈ ಅಗ್ಗಳಿಕೆಯನ್ನು ಪಡೆದಿದ್ದು ವಿಶೇಷ. ಸರಿಸುಮಾರು
ಒಂಬತ್ತು ಕೋಟಿ ಜನರು ಕಳೆದ ವರ್ಷ ದುಬೈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದರು. ಹಿಂದಿನ ವರ್ಷಕ್ಕೆ
ಹೋಲಿಸಿದರೆ ಈ ವರ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 6.1 ರಷ್ಟು ಹೆಚ್ಚಳ ಕಂಡುಬಂದಿದೆ.
ವಿಶ್ವದ ದರ್ಜೆಯ ನಗರವಾಗಿ ಎಮಿರೇಟ್‌ನ
ಸ್ಥಾನವನ್ನು ಹಿಗ್ಗಿಸಲು ಬೇಕಾದ ಪ್ರಗತಿ ಕಾಮಗಾರಿಗಳು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದು
ದುಬೈ ಇನ್ನಷ್ಟು ಅಭಿವೃದ್ಧಿಯನ್ನು ಸದ್ಯೋಭವಿಷ್ಯದಲ್ಲೇ ದಾಖಲಿಸಲಿದೆ ಎನ್ನುವುದು ದಿಟ.
Post a Comment